‘ಕಳಂಕಿತ’ ಲೇಬಲ್ ಮಧ್ಯೆ ನಾನು ಹೊಕ್ಕಾಗ …

ಲೀಲಾ ಸಂಪಿಗೆ


ಕೊನೆಗೂ ಬರೆಯೋಕೆ ಕುಳಿತೆ. ಗೆಳೆಯರ ಒತ್ತಾಸೆಯ ಮಜರ್ಿಯಲ್ಲಿ ಬರೆದಿಲ್ಲವೆಂದಲ್ಲ! ಈ ತಪ್ಪಿದ ಹಾದಿಯ ಪಯಣಿಗರ ಬಗ್ಗೆ ಬರೆಯುತ್ತಲೇ ಬಂದಿರುವೆ. ಪಾಚಿಗಟ್ಟಿದ ಜಾರುದಾರಿಯಲ್ಲಿ ಸಾವರಿಸಿ ನಿಲ್ಲಲೂ ಆಗದೆ, ಹಾಗೆಂದು ಜಾರದಿರಲೂ ಆಗದೆ ತತ್ತರಿಸಿದವರ ನೋವಿನ, ಅವಮಾನದ, ಹತಾಶೆಯ, ಸಂಕಟದ ಬದುಕುಗಳ ಒಂದಷ್ಟು ಹೆಪ್ಪಿನ ಬುತ್ತಿಯನ್ನು ನನ್ನೊಳಗೆ ಹುದುಗಿಸಿಟ್ಟುಕೊಂಡೇ ಬಂದಿರುವೆ. ಬುತ್ತಿ ಬಿಚ್ಚಿಕೊಳ್ಳಲಾರದೇ ‘ಒಂದಷ್ಟು’ ನನ್ನೊಳಗೇ ಹುದುಗಿಬಿಟ್ಟಿವೆ. ಹೆಪ್ಪುಗಟ್ಟಿವೆ. ನಿಮ್ಮೊಂದಿಗೆ ಹಂಚಿಕೊಳ್ಳುವ ತಪನೆಯಿದೆ.
ಸಂಸ್ಕೃತದ ಶಬ್ದ ‘ವೇಶ್ಯಾ’ ಶಬ್ದದ ಮೂಲದಿಂದ ಬಂದು ಜನಜನಿತವಾಗಿರುವ ವೇಶ್ಯೆ ಅಥವಾ ಇಂದಿನ ‘ಲೈಂಗಿಕ ವೃತ್ತಿ ಮಹಿಳೆ’ಯು ಅವರ ಬದುಕುಗಳಿಗೆ ಗಂಭೀರವಾದ ಹೊಣೆಯೊಂದನ್ನು ಹೊತ್ತು ಒಳಹೊಕ್ಕಿದೆ. ಆ ನಿಧರ್ಾರ ಮಡಿದ ದಿನ ಅದೆಂಥಾ ದುಗುಡ, ಭಯ, ದ್ವಂದ್ವ ಒಳಗೊಳಗೇ ಹುಟ್ಟಿದ ನಡುಕ, ನಿದ್ದೆಗೆಡಿಸಿ ಬೆಚ್ಚಿಸಿದ ಆ ರಾತ್ರೆಗಳು ನನ್ನೊಳಗೇ ಒಂದು ಸಂಘರ್ಷವನ್ನು ತೀವ್ರಗೊಳಿಸಿದ್ದವು.
ಇಟ್ಟ ಹೆಜ್ಜೆ ಹಿತೆಗೆಯಲಿಲ್ಲ. ಒಂದು ಸಣ್ಣ ಕಿಂಡಿಯೊಳಗಿಂದ ಪ್ರವೇಶಿಸಿ ಭಾರತಾದಾದ್ಯಂತ ತೆರೆದಿಟ್ಟಿರುವ ಆ ಜಾಲದೊಳಗೆ ಮೈಯ್ಯೆಲ್ಲಾ ಕಣ್ಣಾಗಿ ಒಳಹೊಕ್ಕೇ ಬಿಟ್ಟೆ.  ಒಂದು mental distance ಕಾಯ್ದುಕೊಳ್ಳದೇ ಹೋಗಿದ್ದರೆ ಇವತ್ತು ಇಷ್ಟು ಪ್ರಶಾಂತವಾಗಿ ಕುಳಿತು ಆ ಅನುಭವಗಳನ್ನು ನಿಮ್ಮ ಮುಂದೆ ಹರವಿಕೊಳ್ಳಲು ಆಗುತ್ತಿರಲಿಲ್ಲವೇನೋ!
ಲೈಂಗಿಕ ವೃತ್ತಿ, ವೇಶ್ಯೆ, ವೇಶ್ಯಾವಾಟಿಕೆ………. ಶತಶತಮಾನಗಳಿಂದಲೂ ಅದೆಂಥಾ ‘ಕಳಂಕಿತ’ ಹಣೆಪಟ್ಟಿ ಹೊತ್ತುಕೊಂಡೇ ಬರುತ್ತಿದೆ ಎಂಬುದು ನಿಮಗೇ ಗೊತ್ತು. ಅಂಥಾ ‘ಕಳಂಕಿತ’ ಲೇಬಲ್ ಮಧ್ಯೆ ನಾನು ಹೊಕ್ಕಾಗ ಆ ಕಳಂಕದ ನೆರಳು ನನ್ನನ್ನು ಹಿಂಬಾಲಿಸದೇ ಬಿಟ್ಟಿಲ್ಲ. ನನ್ನ ಸುತ್ತಲಿನ ಬದುಕು, ಸಮಾಜ ನನ್ನನ್ನು ಗುರುತಿಸಿದ ರೀತಿ, ಅವರು ನನ್ನನ್ನು ಸ್ವೀಕರಿಸುವ ಪ್ರಕ್ರಿಯೆಯಲ್ಲಿ ನಾನನುಭವಿಸಿದ್ದು ಎಲ್ಲವೂ ಹೆಪ್ಪುಗಳೇ!
”ಸಾರ್, ವೇಶ್ಯಾವಾಟಿಕೆ ಬಗ್ಗೆ ನಾನು ಪಿಹೆಚ್.ಡಿ ಮಾಡ್ಬೇಕೂಂತ ಇದ್ದೀನಿ, ಅವರು ಹಾಗೆ, ಹೀಗೆ ಅವರ ಬದುಕುಗಳ ಸಂಕೀರ್ಣತೆಗಳು, ಸಂಕಷ್ಟಗಳು, ನಿಗೂಢಗಳು…….” ಹೀಗೆ ಮೈಮೇಲೆ ಬಂದವಳಂತೆ ಒದರುತ್ತಿದ್ದೆ. ಎಲ್ಲವನ್ನೂ ಕೇಳಿಸಿಕೊಂಡು ತಮ್ಮ ಕುತೂಹಲಗಳು ತಣಿದ ಮೇಲೆ ಏನಾದ್ರೂ ನೆಪ ಹೇಳಿ ನನ್ನನ್ನು ಸಾಗಿ ಹಾಕಿದ ಅದೆಷ್ಟೋ ಗೈಡ್ಗಳು ನನ್ನ ಕಣ್ಮುಂದೆ ಇದಾರೆ. ಪಾಪ, ಅವರಿಗೆ ಅದ್ಯಾವ ಪರಿಮಿತಿಗಳು, ಆತಂಕಗಳು, ಹಿಂಜರಿತಗಳು ಅಡ್ಡಿ ಬರುತ್ತಿದ್ದವೋ ಕಾಣೆ.
ಸರಿ, ಈ ಗಂಡಸರಾದ್ರೆ ಹಿಂಜರಿತಾರೆ. ಹೆಂಗಸರಾದ್ರೆ! ಅಂತ ಮತ್ತದೇ ರಿಹರ್ಸಲ್ ಮಾಡಿದಾಗ ಟಿಪಿಕಲ್ಲಾಗಿ `ಅವರು ಈ ವೃತ್ತೀನೆ ಯಾಕೆ ಮಾಡ್ಬೇಕು? ಬಿಟ್ಟು ಬಂದು ಬೇರೆ ಕೆಲ್ಸ ಮಾಡ್ಲಿ ಹೇಳು? ಹಾಗಂತ ಎಲ್ರೂ ವೇಶ್ಯಾವೃತ್ತೀನೇ ಮಾಡ್ತಾರಾ?’ ಮುಖ ಗಂಟಿಕ್ಕಿ ಈ ಪ್ರಶ್ನೆಗಳನ್ನು ನನ್ನ ಮೇಲೇ ಒಗೆದಾಗ ‘ಥೂ ಕೆಲ್ಸ ಕೆಡ್ತು’ ಅಂದ್ಕೊಂಡು ಮತ್ತೊಂದು ಹುಡುಕಾಟ ಅಣಿಯಾಗ್ತಿದ್ದೆ. 
ಇನ್ನೂ ಕೆಲವರು ನಾನು ಸಂಶೋಧಕಳೂ, ಮಹಾಪ್ರಬಂಧ ಮಂಡಿಸಬೇಕಾದವಳೂ ಅನ್ನೋದನ್ನು ಮರೆತು ಸಿಕ್ಕಿದ್ದೇ ಛಾನ್ಸು ಅಂತ ಆ ಹುಡ್ಗೀರ ಕೇಸ್ಸ್ಡಡೀಸ್ಗೆ ಅನುವಾಗಿಬಿಡ್ತಿದ್ರು.
ಅಬ್ಬಾ! ಅಂತೂ ಕೊನೆಗೂ ನನ್ನ ಗೈಡ್ ಸಿಕ್ಕಿಯೇ ಬಿಟ್ರು. ಅವರಿಗೆ ಮಾತ್ರ ಪ್ರಥಮ ಭೇಟಿಯಲ್ಲೇ ಕಥೇ ಹೇಳ್ಲಿಲ್ಲ. ಬೇರೆ ಗೈಡ್ಗಳ ಬಗ್ಗೆ ನನಗಾದ ಅನುಭವಗಳನ್ನು ಹೇಳಿಬಿಟ್ಟೆ. ನನ್ನ ಗೈಡ್ ಎಲ್ಲಾ ಕಳಂಕ, ತಾರತಮ್ಯಗಳ ಆತಂಕ ಮೀರಿ ಗೌರವಯುತವಾಗಿಯೇ ನನಗೆ ಮಾರ್ಗದರ್ಶನ ಮಾಡಿದರು ಅನ್ನೋದು ನನ್ನ ಹೆಮ್ಮೆ.


ಒಂದ್ಸಾರಿ ಹಾಸನಕ್ಕೆ ಹೊರಟಿದ್ದೆ, ಅಚಾನಕ್ಕಾಗಿ ವಿದ್ವಾಂಸರೂ, ಪ್ರಗತಿಪರರೂ, ಹಿರಿಯರೂ, ನನ್ನ ಆತ್ಮೀಯರೂ ಆಗಿದ್ದವರೊಬ್ಬರೂ ಬಸ್ಸಲ್ಲಿದ್ದರು. ಪಕ್ಕದಲ್ಲಿ ಕುಳಿತೆ. ಆಗತಾನೆ ಆಫ್ರಿಕಾದ ತರಬೇತುದಾರರು 18 ದಿನಗಳು ಕೊಟ್ಟ ತರಬೇತಿಯೊಂದನ್ನು ಮುಗಿಸಿ ಬಂದಿದ್ದೆ. ಅದು ಹೆಚ್ಐವಿ/ಏಡ್ಸ್ ನಿಯಂತ್ರಣ ಹೊಣೆಗಾರಿಕೆಯ ತರಬೇತಿಯಾಗಿತ್ತು. ಅದೇ ಉಮೇದಿನಲ್ಲಿದ್ದ ನಾನು ಮಾತಾಡಲು ಶುರುವಿಟ್ಟೆ. ಮೊದಮೊದಲು ಹೂಂಗುಟ್ಟಿದವರು ಹುಷಾರಾಗಿಬಿಟ್ರು. ಏಡ್ಸ್, ವೇಶ್ಯೆಯರು…ಶಬ್ದಗಳ ನಡುವೆ ತಮ್ಮನ್ನು ತಾವು ಬಚ್ಚಿಟ್ಟುಕೊಳ್ಳೋಕೆ ಹೆಣಗಾಡ್ತಿದ್ರು. ಕೊನೆಗೂ ತಮ್ಮ ಸೋಗಲಾಡಿ ಕಾಳಜಿ ಬಿಟ್ಟು ಮಡಿವಂತಿಕೆ ಕಚ್ಚೆ ಬಿಗಿ ಮಾಡ್ಕೊಂಡು, `ಇಲ್ಲೆಲ್ಲಾ ನನ್ನ ಪರಿಚಿತರು ಇದಾರೆ, ಒಂದ್ಸಾರಿ ಭೇಟಿಯಾಗಿ ಮಾತಾಡೋಣ’ ಅಂದ್ರು ನೋಡಿ; ನನಗೆ ಆಗ ಅರಿವಾಯ್ತು. ಓ ಇದು ಅತ್ಯಂತ ಉತ್ಕೃಷ್ಟ ಸಂಸ್ಕೃತಿಯ ದೇಶ. ಈಯಪ್ಪಾನೂ ಅದರ ವಾರಸುದಾರನೇ ಅಂತ. ಕೈಯ್ಯಲ್ಲಿದ್ದ `ಜಾಗತೀಕರಣದ ಸವಾಲುಗಳು’ ಪುಸ್ತಕ ತೆರೆದು ಕಣ್ಣಾಡಿಸುವವರಂತೆ ಸ್ತಬ್ಧರಾಗಿಬಿಟ್ರು, ಜಾಗತೀಕರಣದ ಗುತ್ತಿಗೆ ಹಿಡಿದವರಂತೆ!

 
`ಸಾರ್, ವೇಶ್ಯೆಯರ ಬಗ್ಗೆ ಒಂದು ಲೇಖನ ಬರ್ದಿದ್ದೀನಿ’ ಅಂತ ಪರಿಚಿತರೇ ಆದ ಹಿರಿಯ ಪತ್ರಕರ್ತರೊಬ್ಬರಿಗೆ ಹೇಳ್ದೆ. ಅವರನ್ನು ಕನ್ವಿನ್ಸ್ ಮಾಡೋಕೆ `ಸಾರ್, ಅವರ ವೇಷಭೂಷಣ, ಅವರ ಚಪ್ಪಲಿ, ಅವರು ಮುಡಿಯೋ ಹೂಗಳು, ಅವರ ನಡವಳಿಕೆಗಳು….’ ಹೀಗೆ ಸಾಗಿತ್ತು ನನ್ನ ಪ್ರಯತ್ನ. ಮೊದಲೇ ದೊಡ್ಡ ಪತ್ರಿಕೆ. ಇವರೋ ಹಿರಿಯ ಸಂಭಾವಿತರು! ನನ್ನ ಫೋನ್ ನಂಬರ್ ತೊಗೊಂಡ್ರು. ಮಾರನೇ ದಿನ ಸಂಜೆ ಅವರದ್ದೇ ಫೋನು. ಮೆಜೆಸ್ಟಿಕ್ ಹೋಟೆಲ್ ಒಂದರಲ್ಲಿ ಟೀ ಆರ್ಡರ್ ಮಾಡಿ ಕುಳಿತ್ವು. `ಹಾಂ, ಈಗ ಹೇಳು ಲೀಲ; ವೆರಿ ಇಂಟರೆಸ್ಟಿಂಗ್. ಅದೆಷ್ಟು ಸೂಕ್ಷ್ಮ ವಿಷಯಗಳ ಬಗ್ಗೆ ಗಮನಿಸಿದ್ದೀಯ. ಅಂತವರ ಮಧ್ಯೆ ಹೇಗೆ ಪ್ರವೇಶ ಮಾಡ್ದೆ. ನನಗೆ ನಿನ್ನ ಸೂಕ್ಷ್ಮತೆ ಬಗ್ಗೆ ಆಶ್ಚರ್ಯ ಆಗ್ತಾ ಇದೆ…ಹೀಗೇ ವಿಷಯ ಬಿಟ್ಟು ನನ್ನ ಬಗ್ಗೆ ಆಲಾಪನೆ ಹೆಚ್ಚಾದಾಗ ನನಗರಿವಾಯ್ತು ಆ ಕಚ್ಚೆಹರುಕ ಮನಸ್ಸಿನ ಕಾಳಜಿ.


ಹರಿದು ಹೊಲಿದ ಮನಸ ಮೆಟ್ಟಿ
ಮುದುಡಿ ಕುಳಿತ ಮನಸಿಗೆ
ಸಿರಿನೆರೆಯ ಸರಿಪಡಿಸಿ
ಮಂಜಾದ ಕಂಗಳಿಗೆ
ಕಾಡಿಗೆಯ ನೇವರಿಸಿ
ಬಾರದ ಬೈತಲೆಗೆ
ಹಸಿ ಹೂವ ಗಂಧ ಪೂಸಿ
ದೇಹವನ್ನು ಮರಗಟ್ಟಿಸಿ ನಿಂತವಳನ್ನು ಬಿಕರಿಗಿಟ್ಟು ಹಲ್ಲುಗಿಂಜುವ ಗಿರಾಕಿಯಂತೆ ಆಯಪ್ಪ ನನಗೆ ಕಂಡ. ಅಲ್ಲಿಂದ ಕಾಲ್ಕಿತ್ತೆ.
ಒಂದ್ಸಾರಿ ಪೋಲಿಸ್ ಅಧಿಕಾರಿಯೊಬ್ಬರನ್ನು ನೋಡೋಕೆ ಹೋದೆ. ಕಾದೆ. ಕಾದೆ. ಅವರನ್ನು ಭೇಟಿ ಮಾಡಲು ಬಂದೋರನ್ನೆಲ್ಲಾ ಕಳಿಸಿದ ಮೇಲೆ ನನ್ನನ್ನ ಮಾತಾಡಿಸಿದ್ರು. ಯಾಕೇಂದ್ರೆ ನಾನು ಮಾತಾಡೋ ವಿಷಯ ಯಾರೋ ಬೀದಿ ವೇಶ್ಯೆಯರದ್ದಾಗಿತ್ತು. ಅಲ್ದೇನೆ ಅಂಥಾ ಘನಂದಾರಿ ಆದ್ಯತೆ ಇಲ್ಲದ್ದು ಅನ್ನೋ ಮನೋಭಾವ. ಬಾಯಿಬಿಟ್ರೆ `ಬೀದಿ ಸೂಳೇರು’ ಅಂತಾನೇ ಶುರು ಮಾಡೋ ಇವರಿಗೆ ಲೈಂಗಿಕ ವೃತ್ತಿ ಹಾಗೂ ಇಡೀ ಆ ದಂಧೆಯೊಟ್ಟಿಗಿನ ಅವಿನಾಭಾವ ಸಂಬಂಧ! (ಈ ಬಗ್ಗೆ ವಿವರವಾಗಿ ಮತ್ತೆ ಬರೀತೀನಿ) ಅವಳ ಕಮಟು ವಾಸನೆಯ ಬೆವರಿನ ಎದೆಯ ಸಂದಿನಿಂದ ಕಸಿದ ನೋಟುಗಳ ಸ್ಪರ್ಶವನ್ನು ಎಂಜಾಯ್ ಮಾಡುವ ಇವರುಗಳಿಗೆ ಅವಳು ಮಾತ್ರ ನಿಕೃಷ್ಟಳು!
ನನ್ನ ಮಹಾಪ್ರಬಂಧದ ಬಹು ಮುಖ್ಯ ಭಾಗವಾಗಿ ಒಂದು ಪರಿಕಲ್ಪನೆಯನ್ನು ಮುಂದಿಟ್ಟೆ. ಲೈಂಗಿಕ ವೃತ್ತಿಯ ಮಹಿಳಾ ಸಮುದಾಯವನ್ನು ಒಂದು ಆಧುನಿಕ ಬುಡಕಟ್ಟಾಗಿ ಯಾಕೆ ನೋಡಬಾರದು? ಯಾಕೆಂದರೆ ಲೈಂಗಿಕ ವೃತ್ತಿಯಲ್ಲಿ ಗಿರಾಕಿಗಳ ಬೇಟೆಯಾಡುತ್ತಾ ಬದುಕು ಸವೆಸುತ್ತಿರುವ ಈ ಮಹಿಳೆಯರನ್ನು ಇತರ ಜನವಿಭಾಗಗಳನ್ನು ಸಂಘಟಿಸುವಂತೆ ಒಗ್ಗೂಡಿಸಲು ಸಾಧ್ಯವಿಲ್ಲ. ಅವರನ್ನು ಬುಡಕಟ್ಟಾಗಿ ಪರಿಗಣಿಸುವುದು ಅತ್ಯಂತ ಪರಿಣಾಮಕಾರಿ ಎಂಬ ಪ್ರತಿಪಾದನೆ ನನ್ನದಾಗಿತ್ತು. ಡೆಸ್ಮಂಡ್ ಮಾರಿಸ್ ಅವರ ಆಧುನಿಕ ಬುಡಕಟ್ಟುಗಳ ಪರಿಕಲ್ಪನೆಯ ನಿಲುವುಗಳು ನನ್ನನ್ನು ಬೆಂಬಲಿಸಿದ್ದವು. ನನ್ನ ಮಾರ್ಗದರ್ಶಕರ ಹಾಗೂ ವೆರಿಯರ್ ಎಲ್ವಿನ್, ಮಹಾಶ್ವೇತಾದೇವಿ ಮುಂತಾದ ಬುಡಕಟ್ಟು ತಜ್ಞರ ನಿರ್ವಚನಗಳು ನನ್ನನ್ನು ಗಟ್ಟಿಗೊಳಿಸಿದ್ದವು.
ಅದೆಲ್ಲಾ ಒತ್ತಟ್ಟಿಗಿರಲಿ! ನಾನು ಲೈಂಗಿಕ ವೃತ್ತಿಯ ಮಹಿಳೆಯರನ್ನೇನೂ ಬುಡಕಟ್ಟಾಗಿ ಪರಿಭಾವಿಸಬೇಕೆಂಬ ತರ್ಕವನ್ನು ಪಟ್ಟು ಹಿಡಿದು ಬೊಬ್ಬಿಟ್ಟಿರಲಿಲ್ಲ. ಆ ಸಮುದಾಯವನ್ನು ಮನುಷ್ಯರನ್ನಾಗಿ ನೋಡೋಕೆ, ಅವರು ಈ ಭೂಮಿ ಮೇಲೆ ಹುಟ್ಟಿದ ಋಣಕ್ಕೆ ಒಂದು ಐಡೆಂಟಿಟಿ ಕೊಡೋಕೆ ಹೀಗೆ ಯೋಚಿಸಿಬಹುದಾ ಅಂದೆ ಅಷ್ಟೆ. ನಾನು ಇಡೀ ಬುಡಕಟ್ಟನ್ನೇ ಮೈಲಿಗೆ ಮಾಡ್ತಿದ್ದೀನಿ, ಕಳಂಕ ಹಚ್ತಾ ಇದ್ದೀನಿ ಅನ್ನೋ ಹಾಗೆ `ಬುಡಕಟ್ಟು’ ಅನ್ನೋದನ್ನೇ ತಮ್ಮ ಫ್ಯಾಷನ್ ಮಾಡಿಕೊಂಡಿದ್ದ ಬಹುತೇಕ ವಿದ್ವಾಂಸರುಗಳು ಹೌಹಾರಿದರು. ಗೆಳತಿ ಸಿ.ಜಿ. ಮಂಜುಳಾ ಪ್ರಜಾವಾಣಿಯಲ್ಲಿ ಈ ಪರಿಕಲ್ಪನೆಯನ್ನು ಮಂಥನಕ್ಕೆ ಒಡ್ಡಬಹುದೇನೋ ಎಂದು ವಿಶ್ಲೇಷಿಸಿದ್ದನ್ನು ಬಿಟ್ಟರೆ ಸಾರಾಸಗಟಾಗಿ ಬಹುತೇಕರು ತಳ್ಳಿ ಹಾಕಿಬಿಟ್ರು. ಅಷ್ಟೇ ಅಲ್ಲ ಕೆಲವರು ಮೈಮೇಲೆ ಚೇಳು ಬಿಟ್ಟುಕೊಂಡವರಂತೆ ಪರದಾಡಿದ್ರು. `ಸಂಶೋಧನೆ’ಯನ್ನು ತಮ್ಮ ಸ್ವತ್ತನ್ನಾಗಿಸಿಕೊಂಡು ಆಲದಮರದಲ್ಲಿ ನೇತಾಡುವ ಪೋಸ್ ಕೊಟ್ಟುಕೊಳ್ಳುವ ಪಂಡಿತರೊಬ್ಬರು, ನಾನು ಸುಮಾರು ಹದಿನೈದು ವರ್ಷಗಳು ಆ ಸಮುದಾಯದ ಬಿಳಲುಗಳಲ್ಲಿ ಹೊಕ್ಕು ಬಂದು ರೂಪಿಸಿದ್ದ ಈ ಸಂಶೋಧನೆಯ ಕ್ಷೇತ್ರ ಕಾರ್ಯದಲ್ಲಿ ನನ್ನನ್ನು ನಪಾಸು ಮಾಡಿದ್ದರು!
ಹೀಗೆ ವೇಶ್ಯಾವಾಟಿಕೆ `ಅತ್ಯಂತ ಪ್ರಾಚೀನ ವೃತ್ತಿ’ ಅನ್ನೋ ಗರಿಮೆಯನ್ನು ಈ ವ್ಯವಸ್ಥೆ ನಿರೂಪಿಸುತ್ತಲೇ ಬಂದಿದೆ. ಈ ವೃತ್ತಿಯ ಸುತ್ತ ತನ್ನ ಕಬಂಧ ಬಾಹುಗಳನ್ನು ಚಾಚಿ ಅನಾಯಾಸವಾಗಿ ತನ್ನ ತೃಷೆಯನ್ನು ಹಿಂಗಿಸಿಕೊಳ್ಳುವ ಹುನ್ನಾರದಲ್ಲಿ ಇರದಿದ್ದ ಮಡಿವಂತಿಕೆ ಕಣ್ಣು ಮುಚ್ಚಿ ಹಾಲು ಕುಡಿಯುವ ಹುಂಬತನದಲ್ಲಿ ಕಣ್ಣಿಗೆ ರಾಚುತ್ತದೆ.
ಹಾಗೆಂದು ನನ್ನನ್ನು ಬೆಂಬಲಿಸಿದವರು, ನನಗೆ ಧೈರ್ಯ ತುಂಬಿದವರು, ರಕ್ಷಾ ಕವಚವನ್ನೇ ಮಾನಸಿಕವಾಗಿ ತೊಡಿಸಿದವರು, ನನ್ನ ಧಾವಂತಗಳಿಗೆ ಸ್ಪಂದಿಸಿದವರು ನನ್ನೊಂದಿಗಿದ್ದಾರೆ. ಇಲ್ಲದಿದ್ದಲ್ಲಿ ಅದೆಂದೋ ನಾನು ಹೂತುಹೋಗಿ ಬಿಡುತ್ತಿದ್ದೆ. ಅವರನ್ನೆಲ್ಲಾ ನಾನಿಲ್ಲಿ ಮರೆತು ಸಾರಾಸಗಟಾಗಿ ಕಳಂಕದ ನೆರಳನ್ನು ಮಾತ್ರ ಚಿತ್ರಿಸುತ್ತಿಲ್ಲ. ನನ್ನವರಾಗಿ, ನನ್ನ ವಿಚಾರಗಳ ಕಾಳಜಿದಾರರಾಗಿ ಅವರೆಲ್ಲಾ ನನ್ನೊಳಗಿದ್ದಾರೆ ತಣ್ಣಗೆ.
ಅದೆಷ್ಟು ವಿಚಾರಗಳನ್ನ ಪಿಸು ನುಡಿದೆ. ಆತಂಕಿತಳಾದೆ, ಅವಮಾನಿತಳಾದೆ, ನಡುಗಿದೆ, ನಕ್ಕು ಹಗುರಾದೆ. ಸದಾ ಬೆಂಕಿಯನ್ನು ಸೆರಗಲ್ಲೇ ಕಟ್ಟಿಕೊಂಡು ತಿರುಗಿದೆ. ಅದೆಷ್ಟು ಅಪಾಯದ ಬಂಡೆಗಳಿಗೆ ತಲೆಯೊಡ್ಡಿದೆ. ಇವರ ಮಧ್ಯೆ ಇರುವುದನ್ನೇ ನೆಪ ಮಾಡಿಕೊಂಡು ತಮ್ಮ ವೀಕ್ನೆಸ್ಗಳ ಅಹವಾಲುಗಳೊಂದಿಗೆ ಬಂದ ಆಹ್ವಾನಗಳ ಬೆಂಕಿಯಲ್ಲಿ ಧಗಧಗಿಸಿದೆ…ಅವೆಲ್ಲ ಅನುಭವಗಳ ನೆನಪುಗಳು ತೆರೆ ಸರಿಸುವ ಪ್ರಯತ್ನವನ್ನು ಮಾಡುತ್ತಿವೆ.

ನಿಮ್ಮ ಟಿಪ್ಪಣಿ ಬರೆಯಿರಿ